LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಮುಹೂರ್ತ ಫಿಕ್ಸ್ ಆಗಿದೆ, ಆದರೆ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ : ಸತೀಶ್ ಜಾರಕಿಹೊಳಿ

Advertisement

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಕಳೆದ ಆರು ತಿಂಗಳುಗಳಿಂದ ಹೊಗೆಯಾಡುತ್ತಿರುವ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನರಚನೆಯ ಗೊಂದಲಗಳಿಗೆ ನಾಳೆ ಅಂತಿಮ ತೆರೆ ಬೀಳುವ ಸಾಧ್ಯತೆ ಇದೆ. ನವದೆಹಲಿಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಹೈಕಮಾಂಡ್ ಮಹತ್ವದ ಸಭೆ ಕರೆದಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಬುಲಾವ್ ನೀಡಿದೆ.

ಈ ಕುರಿತು ಮಾತನಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, (Satish Jarkiholi) ನಾಳೆ 11 ಗಂಟೆಗೆ ಹೈಕಮಾಂಡ್ ಪ್ರಶ್ನೆ ಪತ್ರಿಕೆ ಕೊಡುತ್ತೆ. ಆ ಬಳಿಕ ಪ್ರಶ್ನೆಗೆ ಉತ್ತರ ಟಿಕ್ ಮಾಡ್ತಾರೆ. ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ ಬಿಡಿ ಎಂದು ಪರೋಕ್ಷವಾಗಿ ಅಧಿಕಾರ ಹಂಚಿಕೆ ಚರ್ಚೆಗೆ ಬ್ರೇಕ್ ಬೀಳಲಿದೆ ಎನ್ನುವ ಅರ್ಥದಲ್ಲಿ ಹೇಳಿದರು.

ಸಭೆಯ ಅಜೆಂಡಾ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಕಳೆದ ಆರು ತಿಂಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲೆಂದೇ ಹೈಕಮಾಂಡ್ ಈ ಸಭೆ ಕರೆದಿದೆ ಎಂಬ ಸೂಚನೆ ಇದೆ ಎಂದು ಜಾರಕಿಹೊಳಿ ತಿಳಿಸಿದರು. 

 ಇವಿಎಂ ಓಪನ್ ಆದ ಮೇಲೆಯೇ ಯಾರಿಗೆ ಎಷ್ಟು ವೋಟ್ ಬಿದ್ದಿದೆ ಎಂದು ಗೊತ್ತಾಗುವಂತೆ, ನಾಳೆಯ ಸಭೆಯ ಬಳಿಕವೇ ಹೈಕಮಾಂಡ್ ನಿರ್ಧಾರ ಏನೆಂಬುದು ಸ್ಪಷ್ಟವಾಗಲಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ದೆಹಲಿಯತ್ತ ಮುಖ ಮಾಡಿದ ಸಚಿವರು, ಶಾಸಕರ ದಂಡು

ಈ ಸಭೆಯು ಕೇವಲ ಔಪಚಾರಿಕ ಸಭೆಯಲ್ಲ ಎಂಬುದು ರಾಜ್ಯ ನಾಯಕರ ದೆಹಲಿ ಪ್ರವಾಸದಿಂದ ಸ್ಪಷ್ಟವಾಗುತ್ತಿದೆ.

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಸಚಿವರಾದ ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ಭೈರತಿ ಸುರೇಶ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನೊಳಗೊಂಡ ಪ್ರಮುಖ ನಾಯಕರ ದಂಡೇ ದೆಹಲಿಗೆ ತೆರಳುತ್ತಿದೆ. 

ಇದರ ಬೆನ್ನಲ್ಲೇ ಸಚಿವರಾದ ಪ್ರಿಯಾಂಕ್ ಖರ್ಗೆ, ನರೇಂದ್ರ ಸ್ವಾಮಿ, ಹಂಪನಗೌಡ ಬಾದರ್ಲಿ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಶಾಸಕರು ಮತ್ತು ಎಂಎಲ್‌ಸಿಗಳು ಕೂಡ ಇವತ್ತು ಸಂಜೆಯೇ ದೆಹಲಿಗೆ ಪ್ರಯಾಣ ಬೆಳೆಸಿರುವುದು ಭಾರಿ ಕುತೂಹಲ ಮೂಡಿಸಿದೆ .

ರಾಹುಲ್ ಗಾಂಧಿ ನಡೆ ಮೇಲೆ ಎಲ್ಲರ ಕಣ್ಣು

ನಾಳೆಯ ಸಭೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಆಗಮಿಸಲಿದ್ದಾರೆಯೇ ಎಂಬುದು ಮುಖ್ಯವಾಗಿದೆ. ಒಂದು ವೇಳೆ ರಾಹುಲ್ ಗಾಂಧಿ ಅವರು ಸಭೆಯಲ್ಲಿ ಭಾಗವಹಿಸಿ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದರೆ ಮುಂದಿನ 2-3 ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ನಿಶ್ಚಿತ. ಆದರೆ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರನ್ನು ಜೊತೆಗೆ ಕರೆದೊಯ್ಯುತ್ತಿರುವುದು ಹೈಕಮಾಂಡ್ ಮುಂದೆ ತಮ್ಮ ಸಂಖ್ಯಾಬಲ ಪ್ರದರ್ಶಿಸಲು ಮತ್ತು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹೂಡಿರುವ ತಂತ್ರ ಎನ್ನಲಾಗುತ್ತಿದೆ.

ಇನ್ನೊಂದೆಡೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪಾಳಯವೂ ಈ ಸಭೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. 

ನಾಳೆ ಬೆಳಗ್ಗೆ ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಯು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಂದಿನ ದಿಕ್ಸೂಚಿಯನ್ನು ನಿರ್ಧರಿಸಲಿದ್ದು, ಇಡೀ ರಾಜ್ಯದ ಕಣ್ಣು ದೆಹಲಿಯತ್ತ ನೆಟ್ಟಿದೆ.



Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST