ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕ ಜಿಲ್ಲೆಗಳ ಹಲವು ಕಡೆ ಮಳೆಯಾಗುತ್ತಿದ್ದು. ಸಿಡಿಲು ಬಡಿದು ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ನಾಗೂರು ಗ್ರಾಮದ ಹೊಲದಲ್ಲಿ ಕೆಲಸ ಮಾಡುವಾಗ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಹೊಲದ ಮಾಲೀಕನ ಪತ್ನಿ ಲಕ್ಷ್ಮಿ ಬಸಯ್ಯ ಗುತ್ತೇದಾರ(45) ಹಾಗೂ ಅವರ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದ ಸೈಜಾದಬೀ ಫತ್ರುಸಾಬ್ (60) ಮೃತರು.
ಬಸಯ್ಯ ಗುತ್ತೇದಾರ ಹೊಲದಲ್ಲಿ ತೊಗರಿ ಬೆಳೆಯಲ್ಲಿ ಸುಮಾರು ಏಳೆಂಟು ಮಹಿಳೆಯರು ಕಳೆ ಕೀಳುತ್ತಿದ್ದರು. ಮಧ್ಯಾಹ್ನ ಊಟ ಮಾಡಲು ಮರದ ಕೆಳಗೆ ಬಂದು ಕುಳಿತಿದ್ದರು. ಅದೇ ಸಮಯದಲ್ಲಿ ದಿಢೀರ್ ಮಳೆ ಸುರಿಯಲಾರಂಭಿಸಿದೆ.
ಮಳೆಯಿಂದ ರಕ್ಷಣೆ ಪಡೆಯಲು ಗಿಡದ ಕೆಳಗೆ ಆಸರೆಗೆ ನಿಂತಿದ್ದ ವೇಳೆ ಏಕಾಏಕಿ ಭಾರಿ ಗುಡುಗು ಮಿಂಚಿನೊಂದಿಗೆ ಸಿಡಿಲು ಎರಗಿದೆ. ಅಲ್ಲಿದ್ದ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಇನ್ನುಳಿದವರು ಪಾರಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.


