ತುಮಕೂರು: ಪೊಲೀಸರ ಕಣ್ಣಿಗೆ ಮಣ್ಣೆರಚಿ ಕಳ್ಳಾಟ ಆಡುವ ಕಿಡಿಗೇಡಿಗಳ ನಡುವೆ, ಸ್ವತಃ ಪೊಲೀಸಪ್ಪನ ಮನೆಯಲ್ಲೇ ಕಾನೂನು ಬಾಹಿರ ಕೃತ್ಯವೊಂದು ಬೆಳಕಿಗೆ ಬಂದು ಇಡೀ ಪೊಲೀಸ್ ಇಲಾಖೆಯನ್ನು ತಲೆತಗ್ಗಿಸುವಂತೆ ಮಾಡಿದೆ.
ತುಮಕೂರು (Tumkuru) ಜಿಲ್ಲೆಯ ಗುಬ್ಬಿ (Crime) ತಾಲೂಕಿನ ಗಡಿ ಭಾಗದಲ್ಲಿ ಖಾಕಿ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೆಡ್ ಕಾನ್‌ಸ್ಟೇಬಲ್ ಅವರ ತೋಟದಲ್ಲೇ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕಾನ್‌ಸ್ಟೇಬಲ್ (Police Constable) ಅವರ ಪುತ್ರನೇ ಈಗ ಗಾಂಜಾ ಮಾಲು ಸಮೇತ ಪೊಲೀಸರ ಅತಿಥಿಯಾಗಿದ್ದಾನೆ.
ಗುಬ್ಬಿ ತಾಲೂಕಿನ ಗುಡ್ಡದಹಳ್ಳಿ ಹಟ್ಟಿ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯ ಮಗ ಹಿತೇಂದ್ರ ಬಂಧಿತ ಆರೋಪಿಯಾಗಿದ್ದಾನೆ.
ತನ್ನ ಸ್ವಂತ ತೋಟದಲ್ಲಿ ಯಾರಿಗೂ ಅನುಮಾನ ಬಾರದಂತೆ, ತೆಂಗು ಮತ್ತು ಚಡೆ ಗಿಡಗಳ ಸಾಲಿನಲ್ಲಿ ಅತ್ಯಂತ ಗುಟ್ಟಾಗಿ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು. ಪ್ರತಿದಿನ ಪ್ರೀತಿಯಿಂದ ನೀರು, ಗೊಬ್ಬರ ಹಾಕಿ ಈ ಗಾಂಜಾ ಗಿಡವನ್ನು ಹಿತೇಂದ್ರ ಆರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಬರೋಬ್ಬರಿ 8 ಅಡಿ ಎತ್ತರಕ್ಕೆ ಸೊಂಪಾಗಿ ಬೆಳೆದು ನಿಂತಿದ್ದ ಈ ಗಾಂಜಾ ಗಿಡದ ಬಗ್ಗೆ ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಚೇಳೂರು ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ.


