LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ವಂಟಮೂರಿಯಲ್ಲಿ ಮಹಿಳೆಯ ವಿವಸ್ತ್ರ ಕೇಸ್ : 12 ಆರೋಪಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ ಪ್ರಕಟ

Advertisement
ಬೆಳಗಾವಿ: ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಾದ 12 ಮಂದಿಗೆ ಐದು ವರ್ಷ ಕಠಿಣ ಶಿಕ್ಷೆ ಪ್ರಕಟಗೊಂಡಿದೆ.

ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ಅವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ.

ಆರೋಪಿಗಳಿಗೆ ಆಯಾ ಸೆಕ್ಷನ್ ಅಡಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದ್ದು, ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಆರೋಪಿಗಳು, ಕುಟುಂಬಸ್ಥರು ಕಣ್ಣೀರು ಹಾಕಿದರು.

ಆರೋಪಿಗಳಾದ ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ, ಶಿವಪ್ಪ ವನ್ನೂರಿಗೆ ಶಿಕ್ಷೆ ಪ್ರಕಟವಾಗಿದೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಅವರು ಶಿಕ್ಷೆ ಅನುಭವಿಸಲಿದ್ದಾರೆ. ಇಂದು ಬೆಳಿಗ್ಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಪೊಲೀಸ್ ವಾಹನಗಳಲ್ಲಿ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ಈ ಪ್ರಕರಣವು 2023ರ ಡಿಸೆಂಬರ್ 11ರಂದು ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿತ್ತು. ಪ್ರೀತಿಸಿದ ಯುವತಿಯೊಂದಿಗೆ ಮನೆ ಬಿಟ್ಟು ಮಗ ಪರಾರಿಯಾಗಿದ್ದ. ಇವರಿಬ್ಬರ ಪ್ರೀತಿಗೆ ಯುವತಿ ಮನೆಯಲ್ಲಿ ವಿರೋಧ ಇತ್ತು. ಆಕೆಗೆ ಬೇರೊಬ್ಬ ಯುವಕನ ಜೊತೆಗೆ ಒತ್ತಾಯದಿಂದ ನಿಶ್ಚಿತಾರ್ಥ ಮಾಡಿದ್ದರು.

ಆದರೆ ಪ್ರೇಮಿಗಳು ಗುಟ್ಟಾಗಿ ಓಡಿಹೋಗಿದ್ದರು. ಹೀಗಾಗಿ ಯುವತಿಯ ಕುಟುಂಬಸ್ಥರು ಆ ಯುವಕನ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಬಳಿಕ ಅಮಾನವೀಯವಾಗಿ ಅವನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದರು.

ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯ ಮೇಲಿನ ಈ ಕ್ರೌರ್ಯವು ಮಾನವೀಯತೆಗೂ ಮೀರಿದ ಕೃತ್ಯ ಎಂದು ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಬಳಿಕ ಈ ಘಟನೆಗೆ ಕಾರಣವಾಗಿದ್ದ ವಂಟಮೂರಿ ಗ್ರಾಮದ ಪ್ರೇಮಿಗಳನ್ನು ಹುಡುಕಿದ ಪೊಲೀಸರು ಮದುವೆಯನ್ನು ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮಾಡಿದರು. ಅವರೀಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಈ ಘಟನೆ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಕರ್ನಾಟಕ ಹೈಕೋರ್ಟ್ ಈ ಘಟನೆಯನ್ನು ತೀಕ್ಷ್ಣವಾಗಿ ಖಂಡಿಸಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಕೊಂಡಿತ್ತು. ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಪೊಲೀಸರು ಮತ್ತು ಸಿಐಡಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒತ್ತಾಯಿಸಿತ್ತು.

ಈ ಪ್ರಕರಣದಲ್ಲಿ ಓರ್ವ ಬಾಲಾಪರಾಧಿ ಸೇರಿ ಒಟ್ಟು 13 ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಸುಧೀರ್ಘವಾಗಿ ಎರಡು ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ, ಬಾಲಾಪರಾಧಿಯನ್ನು ಹೊರತುಪಡಿಸಿ ಉಳಿದ 12 ಮಂದಿ ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST