LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

LIC ಹಣದ ಆಸೆಗೆ ತಮ್ಮನನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಅಣ್ಣಾ 

Advertisement

ತುಮಕೂರು: ಹಣದ ದುರಾಸೆ ಮನುಷ್ಯನನ್ನು ಎಷ್ಟರಮಟ್ಟಿಗೆ ಕುರುಡಾಗಿಸುತ್ತದೆ ಎಂಬುದಕ್ಕೆ ತುಮಕೂರಿನಲ್ಲಿ ನಡೆದ ಈ ಭೀಕರ ಹತ್ಯೆ ಪ್ರಕರಣವೇ ಸಾಕ್ಷಿ. ಜೀವ ವಿಮೆ (LIC) ಹಣದ ಆಸೆಗೆ ಬಿದ್ದ ಅಣ್ಣನೊಬ್ಬ, ಸುಪಾರಿ ಹಂತಕರ ನೆರRecordನೊಂದಿಗೆ ಸ್ವಂತ ತಮ್ಮನನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಲು ಯತ್ನಿಸಿದ ವಿಲಕ್ಷಣ ಘಟನೆಯನ್ನು ಪಟ್ಟನಾಯಕನಹಳ್ಳಿ ಪೊಲೀಸರು ಭೇದಿಸಿದ್ದಾರೆ.

ಬೈಕ್ ಅಪಘಾತ ಎಂದು ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅಣ್ಣ ಹನುಮಂತರಾಜು ಸೇರಿದಂತೆ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಘಾತದ ಹಿಂದೆ ಅಡಗಿತ್ತು 30 ಲಕ್ಷ ರೂ. ವಿಮೆ ಕಹಾನಿ!

ಆಂಧ್ರಪ್ರದೇಶ ಮೂಲದ 35 ವರ್ಷದ ರಮೇಶ್ ಕೊಲೆಯಾದ ದುರ್ದೈವಿ. ಈತ ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಎಳನೀರು ಹಾಗೂ ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡುತ್ತಿದ್ದ. ಹೆಂಡತಿಯಿಂದ ದೂರವಾಗಿದ್ದ ರಮೇಶ್, ಇತ್ತೀಚೆಗೆ ಮಾಟಮಂತ್ರದ ಕಡೆಗೆ ಆಕರ್ಷಿತನಾಗಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆತನ ಅಣ್ಣ ಹನುಮಂತರಾಜು, ತಮ್ಮನ ಹೆಸರಿನಲ್ಲಿ 15 ಲಕ್ಷ ರೂಪಾಯಿಯ ಎಲ್‌ಐಸಿ ಪಾಲಿಸಿ ಮಾಡಿಸಿ, ತಾನೇ ನಾಮಿನಿಯಾಗಿದ್ದ. ಇದಕ್ಕಾಗಿ ವರ್ಷಕ್ಕೆ 85,000 ರೂಪಾಯಿ ಪ್ರೀಮಿಯಂ ಅನ್ನು ಅಣ್ಣನೇ ಪಾವತಿಸುತ್ತಿದ್ದ.

ನಿಯಮಗಳ ಪ್ರಕಾರ, ವಿಮೆ ಚಾಲ್ತಿಯಲ್ಲಿರುವಾಗ ಪಾಲಿಸಿದಾರ ಅಪಘಾತದಲ್ಲಿ ಮರಣ ಹೊಂದಿದರೆ ನಾಮಿನಿಗೆ ದುಪ್ಪಟ್ಟು ಅಂದರೆ 30 ಲಕ್ಷ ರೂಪಾಯಿ ಹಣ ಸಿಗುತ್ತಿತ್ತು. ಈ ಭಾರಿ ಮೊತ್ತದ ಹಣವನ್ನು ಲಪಟಾಯಿಸಲು ಹನುಮಂತರಾಜು, ತಮ್ಮನನ್ನೇ ಮುಗಿಸಲು ಸ್ಕೆಚ್ ಹಾಕಿದ್ದ.

ನಿಧಿ ಪೂಜೆಯ ಆಮಿಷ: ಮೈಮೇಲೆ ಕಾರು ಹರಿಸಿ ಕ್ರೂರ ಹತ್ಯೆ

ಹತ್ಯೆಗಾಗಿ ಅಣ್ಣ ಹನುಮಂತರಾಜು ಬೆಂಗಳೂರಿನ ನವಯುಗ ಟೋಲ್ ಬಳಿ ತನ್ನ ಅಂಗಡಿಗೆ ಬರುತ್ತಿದ್ದ ಲಕ್ಷ್ಮೀಕಾಂತ, ನವೀನ್ ಹಾಗೂ ಎಂ.ಡಿ.ಜಿಲಾನ್ ಎಂಬುವವರ ಜೊತೆ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದ.

ಕಳೆದ ಜೂನ್ 19ರಂದು "ನಿರ್ಜನ ಪ್ರದೇಶದಲ್ಲಿ ನಿಧಿ ಪೂಜೆ ಇದೆ" ಎಂದು ನಂಬಿಸಿ ರಮೇಶ್‌ನನ್ನು ಶಿರಾ-ಅಮರಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು.

ಅಲ್ಲಿ ಹಂತಕರು ಮೊದಲು ರಮೇಶ್ ಮೇಲೆ ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಆತನ ಮೈಮೇಲೆ ಕಾರು ಹರಿಸಿದ್ದಾರೆ. ಆದರೂ ಜೀವ ಹೋಗದಿದ್ದಾಗ, ಕೊನೆಗೆ ಬ್ಯಾಟರಿ ಜಂಪಿಂಗ್ ವೈರ್ ಬಳಸಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಅಪಘಾತವೆಂದು ಬಿಂಬಿಸಲು ಹರಸಾಹಸ; ಕೃತ್ಯ ಬಯಲು

ರಮೇಶ್ ಪ್ರಾಣ ಪಕ್ಷಿ ಹಾರಿದ ಬಳಿಕ, ಹಂತಕರು ಶವ ಮತ್ತು ಆತನ ಬೈಕನ್ನು ರಸ್ತೆಯ ಮೇಲೆ ಎಸೆದಿದ್ದಾರೆ. ಇದೊಂದು ಅಪಘಾತದಂತೆ ಕಾಣಲಿ ಎಂದು ಬೈಕಿನ ಮುಂಭಾಗವನ್ನು ತಾವೇ ಜಖಂ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.

ಮರುದಿನ ರಸ್ತೆಯಲ್ಲಿ ಶವ ಪತ್ತೆಯಾದಾಗ, ಮೃತನ ಹಿರಿಯ ಅಣ್ಣ ರಂಗನಾಥ್ ನೀಡಿದ ದೂರಿನನ್ವಯ ಪಟ್ಟನಾಯಕನಹಳ್ಳಿ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಘಟನೆಯ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ತನಿಖೆಗೆ 3 ವಿಶೇಷ ತಂಡಗಳನ್ನು ರಚಿಸಿದ್ದರು.

ತೀವ್ರ ವಿಚಾರಣೆ ಮತ್ತು ತಾಂತ್ರಿಕ ಆಧಾರದ ಮೇಲೆ ತನಿಖೆ ನಡೆಸಿದಾಗ, ಅಪಘಾತದ ನಾಟಕವಾಡಿದ್ದ ಅಣ್ಣ ಹನುಮಂತರಾಜು ಮತ್ತು ಆತನ ಸಹಚರರ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಸದ್ಯ ಪೊಲೀಸರು ನಾಲ್ಕೂ ಜನ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST