ಬೆಂಗಳೂರು: ರಾಜ್ಯದಲ್ಲಿ ಮುಂಬರುವ ವಿಧಾನಮಂಡಲ ಅಧಿವೇಶನ ಆರಂಭವಾಗುವುದಕ್ಕೂ ಮೊದಲೇ ರಾಜ್ಯ ಸಚಿವ ಸಂಪುಟಕ್ಕೆ ನೂತನ ಮಹಿಳಾ ಸಚಿವೆಯೊಬ್ಬರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ.
ನಗರದ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಆಯೋಜಿಸಲಾಗಿದ್ದ 'ಗೃಹಲಕ್ಷ್ಮಿ' ಯೋಜನೆಯ ಫಲಾನುಭವಿಗಳೊಂದಿಗಿನ ಸಂವಾದ ಸಮಾರಂಭದ ಸಮಾರೋಪ ನುಡಿಗಳನ್ನಾಡಿದ ಅವರು, ಸರ್ಕಾರದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಗೃಹಲಕ್ಷ್ಮಿ ಯೋಜನೆಯಡಿ ಲಭ್ಯವಾಗುವ ಹಣವನ್ನು ಮಹಿಳೆಯರು ಶೇ. 10 ರವರೆಗೆ ಅತಿಯಾದ ಬಡ್ಡಿ ವಸೂಲಿ ಮಾಡುವ ಮೀಟರ್ ಬಡ್ಡಿ ಅಥವಾ ಮೋಸ ಹೋಗುವಂತಹ ಚೀಟಿ ವ್ಯವಹಾರಗಳಲ್ಲಿ ತೊಡಗಿಸಬಾರದು ಎಂದು ಸಿಎಂ ಕಿವಿಮಾತು ಹೇಳಿದರು.
ಮೀಟರ್ ಬಡ್ಡಿ ಹಾಗೂ ಅತಿಯಾದ ಬಡ್ಡಿ ಪದ್ಧತಿಯಿಂದಾಗಿ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಇಂತಹ ಅಕ್ರಮ ಬಡ್ಡಿ ದಂಧೆ ಹಾಗೂ ಮೋಸದ ವ್ಯವಹಾರಗಳಿಗೆ ಸರ್ಕಾರ ಶೀಘ್ರದಲ್ಲೇ ಕಟ್ಟುನಿಟ್ಟಿನ ಕಡಿವಾಣ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.


