ತುರುವೇಕೆರೆ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಫುಟ್‌ಪಾತ್ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನುಇಂದು ಪಟ್ಟಣ ಪಂಚಾಯ್ತಿ ಅತ್ಯಂತ ಯಶಸ್ವಿಯಾಗಿ ನಡೆಸಿತು.
ಪಟ್ಟಣ ಪಂಚಾಯ್ತಿ ವತಿಯಿಂದ ಪಟ್ಟಣದ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆಗೆ ಸಂಕೀರ್ಣದ ಸುತ್ತಲೂ ಇದ್ದ ಬೀದಿಬದಿ ವ್ಯಾಪಾರಿಗಳ ಅಂಗಡಿಗಳು ಅಡ್ಡಿಯಾಗಿತ್ತು. ಇದಲ್ಲದೆ ಪಟ್ಟಣದ ಮಿನಿವಿಧಾನಸೌಧ (ತಾಲೂಕು ಕಛೇರಿ) ಗೇಟ್ ಎದುರು ಸಹ ವಾಹನಗಳ ಪಾರ್ಕಿಂಗ್, ಅಕ್ಕಪಕ್ಕದಲ್ಲಿ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದುದರಿಂದ ತಹಸೀಲ್ದಾರ್ ಅವರ ವಾಹನ ಸಹ ಒಳಗೆ ಹೋಗುವುದಕ್ಕೆ ಕಷ್ಟವಾಗಿತ್ತು. ಪಟ್ಟಣದ ದಬ್ಬೇಘಟ್ಟ-ತಿಪಟೂರು ವೃತ್ತ, ಅಂಬೇಡ್ಕರ್ ರಸ್ತೆ, ಬಾಣಸಂದ್ರ ರಸ್ತೆ, ದಬ್ಬೇಘಟ್ಟ ರಸ್ತೆ, ಮಾಯಸಂದ್ರ ರಸ್ತೆ, ಬಿಇಒ ಕಛೇರಿ ಎದುರು ಎಲ್ಲೆಂದರಲ್ಲಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರಸ್ಥರು ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರಿಂದ ರಸ್ತೆ ಕಿರಿದಾಗಿ ವಾಹನ ಸವಾರರ ಸಂಚಾರವೇ ದುಸ್ಥರವಾಗಿತ್ತು, ಇನ್ನು ಪಾದಚಾರಿಗಳಿಗೆ ಸಂಚರಿಸಲು ಸ್ಥಳವೇ ಇರಲಿಲ್ಲ. ಹೀಗಾಗಿ ಬೀದಿಬದಿಯ ವ್ಯಾಪಾರಸ್ಥರಿಗೆ ಬದಲಿ ಸ್ಥಳಾವಕಾಶ ಮಾಡಿಕೊಟ್ಟು ಪಟ್ಟಣದ ಹೃದಯಭಾಗವನ್ನು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಅಗತ್ಯ ಕ್ರಮಕ್ಕೆ ಮುಂದಾಗಿತ್ತು.
ಈ ಹಿನ್ನೆಲೆಯಲ್ಲಿ ಬೀದಿಬದಿಯ ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ರಾಜ್ಯ ಉಚ್ಛ ನ್ಯಾಯಾಲಯ ವ್ಯಾಪಾರಸ್ಥರು ಹಾಗೂ ಪಟ್ಟಣ ಪಂಚಾಯ್ತಿಯ ಮನವಿ, ಹೇಳಿಕೆಗಳನ್ನು ಆಲಿಸಿ, ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ಕುಂದುಕೊರತೆ ನಿವಾರಣಾ ಸಮಿತಿಯನ್ನು ರಚಿಸಿತು. ಸಮಿತಿಯು ಪಟ್ಟಣ ಪಂಚಾಯ್ತಿ ಹಾಗೂ ಬೀದಿಬದಿ ವ್ಯಾಪಾರಸ್ಥರೊಂದಿಗೆ ಹಲವು ಬಾರಿ ಚರ್ಚಿಸಿ, ಸ್ಥಳ ಪರಿಶೀಲನೆ, ಸಾರ್ವಜನಿಕ ಸಮಸ್ಯೆಗಳು ಸೇರಿದಂತೆ ಎಲ್ಲಾ ರೀತಿಯಲ್ಲೂ ಅವಲೋಕನ ಮಾಡಿ ಬೀದಿಬದಿ ವ್ಯಾಪಾರಸ್ಥರಿಗೆ ಬದಲಿ ಸ್ಥಳಾವಕಾಶ ಕಲ್ಪಿಸಿ ತೆರವುಗೊಳಿಸಬಹುದೆಂದು ಆದೇಶಿಸಿತು. ಈ ಆದೇಶದಂತೆ ಬೀದಿಬದಿ ವ್ಯಾಪಾರಸ್ಥರಿಗೆ ಪಟ್ಟಣ ಪಂಚಾಯ್ತಿಯು ವಾಣಿಜ್ಯ ಸಂಕೀರ್ಣದ ಕೆಳ ಅಂತಸ್ತು, ಸಂತೆ ಮೈದಾನ ಹಾಗೂ ಪೊಲೀಸ್ ಸ್ಟೇಷನ್ ಪಕ್ಕದ ಸ್ಥಳದಲ್ಲಿ ವ್ಯಾಪಾರಸ್ಥರು ತಮ್ಮ ವ್ಯಾಪಾರ ನಡೆಸುವಂತೆ ತಿಳಿಸಿತು. ಈ ಮಧ್ಯೆ ಪಟ್ಟಣ ಪಂಚಾಯ್ತಿಯು ವಾಣಿಜ್ಯ ಸಂಕೀರ್ಣದ ಅಂಗಡಿಮಳಿಗೆಗಳನ್ನು ಸಹ ಹರಾಜು ಹಾಕಿತು. ಹರಾಜಿನಲ್ಲಿ ಮಳಿಗೆ ಪಡೆದವರು ಶೀಘ್ರ ಮೂಲಸೌಕರ್ಯ ಕಲ್ಪಿಸಿ, ಸಂಕೀರ್ಣಕ್ಕೆ ತೆರಳಲು ಅಡ್ಡವಾಗಿರುವ ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ತೋರಿಸಿ ತೆರವುಗೊಳಿಸುವಂತೆ ಒತ್ತಡ ಹೇರಿದರು. 
ಸುಪ್ರೀಂ ಕೋರ್ಟ್ ಆದೇಶ ಹಾಗೂ ಬೀದಿಬದಿ ವ್ಯಾಪಾರಸ್ಥರ ಕುಂದುಕೊರತೆ ನಿವಾರಣಾ ಸಮಿತಿಯ ಆದೇಶದನ್ವಯ ಪಟ್ಟಣ ಪಂಚಾಯ್ತಿಯು ಅಕ್ಟೋಬರ್ ತಿಂಗಳಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಅಂಗಡಿ ತೆರವುಗೊಳಿಸುವಂತೆ ನೋಟೀಸ್ ನೀಡಿತ್ತು. ಆದರೆ ವ್ಯಾಪಾರಸ್ಥರು ಅಂಗಡಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯ್ತಿಯು ನವೆಂಬರ್ 06 ರಂದು ದಿಢೀರ್ ತೆರವು ಕಾರ್ಯಾಚರಣೆ ಕೈಗೊಂಡು ನಾಗರೀಕರಿಗೆ, ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಈ ಪ್ರಕಾರ ಇಂದು ಬೆಳಿಗ್ಗೆ 6 ಗಂಟೆಯಿಂದ ತೆರವು ಕಾರ್ಯ ಪ್ರಾರಂಭಿಸಿತು. ಪಪಂ ಆಡಳಿತಾಧಿಕಾರಿ, ತಹಸೀಲ್ದಾರ್ ಜಗನ್ನಾಥ್, ಗ್ರೇಡ್ 2 ತಹಸೀಲ್ದಾರ್ ಸುನಿಲ್ ಕುಮಾರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಕಂದಾಯ ನಿರೀಕ್ಷಕ ಪ್ರಶಾಂತ್ ಭದ್ರಣ್ಣನವರ್, ಆರೋಗ್ಯ ನಿರೀಕ್ಷಕ ನರಸಿಂಹಮೂರ್ತಿ, ನೇತೃತ್ವದಲ್ಲಿ ಸಿಪಿಐ ಲೋಹಿತ್, ಪಿ.ಎಸ್.ಐ. ಮೂರ್ತಿ ಹಾಗೂ ಪೊಲೀಸ್ ಸಿಬ್ಬಂದಿಯ ಬಿಗಿ ಬಂದೋಬಸ್ತಿನಲ್ಲಿ ಪಟ್ಟಣ ಪಂಚಾಯ್ತಿಯ ಸಿಬ್ಬಂದಿಗಳು, ಪೌರಕಾರ್ಮಿಕರು, ನೀರು ಸರಬರಾಜುದಾರರು ಬೆಳಿಗ್ಗೆ 6 ರಿಂದ ಸಂಜೆಯವರೆಗೆ ಜೆಸಿಬಿ, ಟ್ರಾಕ್ಟರ್ ಇನ್ನಿತರ ವಾಹನಗಳ ಸಹಾಯದಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ವ್ಯಾಪಾರಿ ಗೂಡಂಗಡಿಗಳು, ನಾಮಫಲಕಗಳು, ವಿವಿಧ ವಸ್ತು ಟೆಂಟ್‌ಗಳನ್ನು ತೆರವುಗೊಳಿಸಿ ಫುಟ್‌ಪಾತನ್ನು ಅಂಗಡಿ ಮುಕ್ತಗೊಳಿಸಿದರು. ಪಟ್ಟಣ ಪಂಚಾಯ್ತಿಯು ವಾಣಿಜ್ಯ ಸಂಕೀರ್ಣದ ಸುತ್ತಲೂ ಅತಿಕ್ರಮವಾಗಿ ಪ್ರವೇಶಿಸಿದಂತೆ ತಾತ್ಕಾಲಿಕ ಟಾರ್ಪಾಲಿನಿಂದ ತಡೆಗೋಡೆ ನಿರ್ಮಿಸಿತು.
ವರದಿ: ಗಿರೀಶ್ ಕೆ ಭಟ್


