ನವದೆಹಲಿ : ಕೇಂದ್ರ ಸರ್ಕಾರ ದೇಶದಲ್ಲಿ E20 ಪೆಟ್ರೋಲ್ ಜಾರಿಗೊಳಿಸಿದ್ದು, ಇದರಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ ಎಂದು ತಿಳಿಸಿದೆ.
ಆದರೆ, ಕರ್ನಾಟಕ ಸರ್ಕಾರ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ಕೆಲವು ಮಾದರಿಗಳಲ್ಲಿ ಶೇ.30ಕ್ಕಿಂತ ಹೆಚ್ಚಿನ ಎಥೆನಾಲ್ ಪತ್ತೆಯಾಗಿದೆ ಎಂಬ ಆರೋಪ ಹೊಸ ಆತಂಕಕ್ಕೆ ಕಾರಣವಾಗಿದೆ.
ಈ ವಿಚಾರವನ್ನು ಮುಂದಿಟ್ಟುಕೊಂಡು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ E20 ಪೆಟ್ರೋಲ್ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ, ಕರ್ನಾಟಕ ಸರ್ಕಾರ ನಡೆಸಿದ ಪರೀಕ್ಷೆಯಲ್ಲಿ ಕೆಲವು ಮಾದರಿಗಳಲ್ಲಿ ಶೇ.30ಕ್ಕಿಂತಲೂ ಹೆಚ್ಚು ಎಥೆನಾಲ್ ಪತ್ತೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘E20 ಈಗ 420 ಆಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಭಾರತೀಯ ದಂಡ ಸಂಹಿತೆಯ ಹಿಂದಿನ ಸೆಕ್ಷನ್ 420 ವಂಚನೆಗೆ ಸಂಬಂಧಿಸಿದ್ದಾಗಿದ್ದು, ಪೆಟ್ರೋಲ್ ಹೆಸರಿನಲ್ಲಿ ವಾಹನ ಸವಾರರಿಗೆ ಮೋಸ ಮಾಡಲಾಗುತ್ತಿದೆ ಎಂಬರ್ಥದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
7 ಜಿಲ್ಲೆಗಳ ಪೆಟ್ರೋಲ್ ಮಾದರಿ ಪರೀಕ್ಷೆ; 11 ಮಾದರಿಗಳಲ್ಲಿ ಮಿತಿ ಮೀರಿದ ಎಥೆನಾಲ್!
ಕರ್ನಾಟಕ ಸರ್ಕಾರವು ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಹಾಗೂ ತುಮಕೂರು ಜಿಲ್ಲೆಗಳಿಂದ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು.
ಬೆಂಗಳೂರಿನ NABL ಮಾನ್ಯತೆ ಪಡೆದ ಹಾಗೂ ISO ಪ್ರಮಾಣೀಕೃತ ಶ್ರೀರಾಮ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಡೆಸಿದ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಒಟ್ಟು 14 ಮಾದರಿಗಳಲ್ಲಿ 11 ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ.20ಕ್ಕಿಂತ ಹೆಚ್ಚಿದೆ ಎಂದು ಹೇಳಿದ್ದಾರೆ.


