ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ನಡೆದ ದುರಂತ ಘಟನೆಯಲ್ಲಿ, ತೆಂಗಿನ ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ ಬಡಿದ ಪರಿಣಾಮ ಒಂದೂವರೆ ವರ್ಷದ ಬಾಲಕ ದಕ್ಷ್ ಪೂಜಾರಿ ಮೃತಪಟ್ಟಿದ್ದಾನೆ. ಈ ದುರ್ಘಟನೆ ಕುಟುಂಬದವರನ್ನು ಹಾಗೂ ಸ್ಥಳೀಯರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಮೃತ ಬಾಲಕ ದಕ್ಷ್, ಹೆರಂಜೆಯ ಪ್ರಶಾಂತ್ ಪೂಜಾರಿ ಹಾಗೂ ಸುಚಿತ್ರ ಪೂಜಾರಿ ದಂಪತಿಯ ಪುತ್ರನಾಗಿದ್ದ. ಮಂಗಳವಾರ ಬೆಳಿಗ್ಗೆ ಸುಮಾರು 8:15ರ ವೇಳೆಗೆ ಸುಚಿತ್ರ ಅವರು ತಮ್ಮ ಪುತ್ರಿ ದಿಯಾಳನ್ನು ಶಾಲಾ ಬಸ್ಸಿಗೆ ಹತ್ತಿಸಲು ಮಗ ದಕ್ಷ್‌ನನ್ನು ಎತ್ತಿಕೊಂಡು ಮನೆಯಿಂದ ಹೊರಟಿದ್ದರು.
ಈ ವೇಳೆ ರಸ್ತೆಯ ಬದಿಯಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ತೆಂಗಿನಕಾಯಿ ಅಚಾನಕ್ ಕೆಳಗೆ ಬಿದ್ದು ಬಾಲಕನ ತಲೆಗೆ ಬಡಿದಿದೆ.

